ಕೃಷಿ

ವ್ಯಾಪಕಾರ್ಥದಲ್ಲಿ ಮೀನುಗಾರಿಕೆ, ಸಮುದ್ರ ಸಂಪತ್ತು, ಅರಣ್ಯ ಹಾಗೂ ಪ್ರಾಥಮಿಕ ಅರಣ್ಯ ಉತ್ಪನ್ನಗಳು; ಆದರೆ ರೂಢಿಯ ಅರ್ಥದಲ್ಲಿ ಕೃಷಿ ಅಂದರೆ ಸಾಗುವಳಿ ಭೂಮಿ ಹಾಗೂ ಅದರ ಉತ್ಪನ್ನಗಳು(ಅಗ್ರಿಕಲ್ಚರ್), ವ್ಯವಸಾಯ, ಬೇಸಾಯ, ಸಾಗುವಳಿ ಮುಂತಾದುವನ್ನು ಸಾಂದರ್ಭಿಕವಾಗಿ ಪರ್ಯಾಯಪದಗಳಾಗಿ ಬಳಸುತ್ತಾರೆ.

ಪ್ರರೂಪಗಳು: ಆಹಾರ ಮತ್ತು ಕೃಷಿ ಸಂಸ್ಥೆ (ಫುಡ್ ಅಂಡ್ ಅಗ್ರಿಕಲ್ಚರ್ ಆರ್ಗನೈಸೇಷನ್, ಎಫ್.ಎ.ಓ) 1962ರಲ್ಲಿ ಪ್ರಕಟಿಸಿದ ಒಂದು ಪತ್ರದಲ್ಲಿ ಈ ಕೆಳಗಿನ ವಿವಿಧ ಪ್ರರೂಪಗಳನ್ನು (ಟೈಪ್ಸ್) ಕೃಷಿಯಲ್ಲಿ ಗುರುತಿಸಿದೆ-(1) ಕೈಗಾರಿಕೆಯಲ್ಲಿ ಪ್ರಗತಿಗೊಂಡಿರುವ ದೇಶಗಳಲ್ಲಿ ಅಲ್ಪಸಾಗುವಳಿ ಪ್ರದೇಶದಿಂದ ಉನ್ನತಮೌಲ್ಯದ ಬೆಳೆಗಳ ತೀವ್ರಕೃಷಿ.(2) ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಾಗುವಳಿ ಎಂದರೆ ಹಳ್ಳಿ ಮತ್ತು ಬೇಸಾಯದಿಂದಲೇ ಬಡಬದುಕನ್ನು ಸಾಗಿಸುವ ರೈತ ಎಂಬ ಅರ್ಥ ಮೂಡುತ್ತದೆ. (3) ಸರಿಯಾದ ಹಿಡುವಳಿಗಳು, ಅವುಗಳಲ್ಲಿ ಮಿಶ್ರಬೆಳೆಗಳ ಹಾಗೂ ಜಾನುವಾರುಗಳ ಸಮೃದ್ಧ ಕೃಷಿ, ತತ್ಪರಿಣಾಮವಾಗಿ ಶ್ರೀಮಂತವಾಗಿರುವ ಕುಟುಂಬ. (4) ಕೇಂದ್ರೀಯವಾದ ಒಂದು ಆಡಳಿತ ವ್ಯವಸ್ಥೆಗೆ ಒಳಪಟ್ಟು ಇರುವ ವಿಸ್ತಾರವಾದ ತೋಟಗಾರಿಕೆಗಳು, ಇವುಗಳ ಮೇಲ್ವಿಚಾರಣೆಗೆ ಸ್ಥಳೀಯವಾಗಿ ಇರುವ ಒಕ್ಕಲುಗಳು ಇತ್ಯಾದಿ. (5) ಕಾಳು ಹಾಗೂ ಹತ್ತಿ ಬೆಳೆಯುವ ಯಾಂತ್ರೀಕೃತವಾದ ವಿಸ್ತಾರ ಬಯಲು ಭೂಮಿಗಳು. ಜಾನುವಾರುಗಳ ಮೇವಿಗಾಗಿ ವಿಶಾಲವಾದ ಹುಲ್ಲುಗಾವಲುಗಳು ಇತ್ಯಾದಿ. (6)ಬೇಸಾಯವನ್ನು ಬಿಡುಸಮಯದ ಉಪಕಸುಬಾಗಿ ಅಂಗೀಕರಿಸಿದ ಇತರ ಉದ್ಯಮಗಳ ಕೆಲಸಗಾರರು ಅಲ್ಪಕಾಲದ ಕೃಷಿಗೋಸ್ಕರ ಉಪಯೋಗಿಸುವ ಹಿಡುವಳಿಗಳು. ಬಿಡುವೇಳೆಯ ಉದ್ಯಮದಿಂದ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವುದೇ ಇಂಥವರ ಪ್ರಧಾನೋದ್ದೇಶ. 

ಇತಿಹಾಸ: ವ್ಯವಸಾಯದ ಆದಿಯನ್ನು ಖಚಿತವಾಗಿ ಹೇಳುವುದು ಸಾಧ್ಯವಿಲ್ಲ. ಕಾರಣ ಅದು ನಾಗರಿಕತೆಯಷ್ಟೇ ಪ್ರಾಚೀನವಾದದ್ದು, ಆದರೆ ಇದರ ವಿಕಾಸ ಹೇಗೆ ಆಗಿರಬಹುದೆಂದು ಊಹಿಸುವುದು ಸುಲಭ. ಮೊದಲಲ್ಲಿ ಮನುಷ್ಯ ತನ್ನ ಆಹಾರ ಸಂಪಾದನೆ ಹಾಗೂ ರಕ್ಷಣೆಗೋಸ್ಕರ ಕೈಕಾಲುಗಳ ಬಲ ಮತ್ತು ಚಟುವಟಿಕೆಗಳ ಮೇಲೆ ಅವಲಂಬಿಸಿಕೊಂಡಿದ್ದ. ನಿಸರ್ಗದಲ್ಲಿ ಸ್ವೇಚ್ಛೆಯಾಗಿ ಸಮೃದ್ಧವಾಗಿ ಬೆಳೆದು ಯಥೇಚ್ಛವಾಗಿ ಈತನಿಗೆ ಲಭಿಸುತ್ತಿದ್ದ ಸಸ್ಯ ಹಾಗೂ ಪ್ರಾಣಿ ಉತ್ಪನ್ನಗಳೇ ಈತನ ಆಹಾರ. ನೆಲ, ಹವೆ, ನೀರು, ಕಾಲ ಇವೇ ಮುಂತಾದ ಅಂಶಗಳನ್ನು ಅನುಸರಿಸಿ ಸಸ್ಯಗಳಲ್ಲಿ ಆಗುತ್ತಿದ್ದ ಬದಲಾವಣೆಗಳನ್ನೂ ಆವರ್ತನೆಗಳನ್ನೂ ಮನುಷ್ಯ ತನ್ನ ಬುದ್ಧಿ ಬೆಳೆದಂತೆ ಗಮನಿಸಿ ಸ್ವಪ್ರಯತ್ನದಿಂದ ಇಂಥ ಕೆಲವು ಕ್ರಿಯೆಗಳಲ್ಲಾದರೂ ಭಾಗಿಯಾಗಲು ಆರಂಭಿಸಿದ. ಹೀಗೆ ತೊಡಗಿರಬೇಕು ಆದಿಮ ವ್ಯವಸಾಯ. ಭಾರತದ ಪ್ರಾಚೀನ ಗ್ರಂಥಗಳಲ್ಲಿ ಉಕ್ತವಾಗಿರುವ ವ್ಯವಸಾಯಪದ್ಧತಿ ತೀರ ಶಾಸ್ತ್ರೀಯವಾದದ್ದು ಮಾತ್ರವಲ್ಲ ಜನಜೀವನದ ಏಳ್ಗೆಗೆ ಮತ್ತು ರಾಷ್ಟ್ರದ ಸರ್ವತೋಮುಖ ಅಭ್ಯುದಯಕ್ಕೆ ವ್ಯವಸಾಯವೇ ಹೇಗೆ ಕಂಕಾಲ ಎಂಬುದನ್ನು ಸಹ ಅಲ್ಲಿ ಅವಧರಿಸಿರುವುದು ಕಾಣುತ್ತದೆ. ವೇದ ಕಾಲದಲ್ಲೇ ಭಾರತೀಯ ವ್ಯವಸಾಯ ಇಷ್ಟೊಂದು ಪ್ರಗತಿಯನ್ನು ಸಾಧಿಸಿದ್ದು ಗಮನಿಸುವಾಗ ಭಾರತದಲ್ಲಿ ಆದಿಮ ವ್ಯವಸಾಯ ಆರಂಭವಾದ ಕಾಲವನ್ನು ಅವೆಷ್ಟೋ ಸಹಸ್ರ ವರ್ಷಗಳ ಹಿಂದಕ್ಕೆ ತಳ್ಳಬೇಕಾಗುತ್ತದೆ. ಕೌಟಿಲ್ಯ, ಶುಕ್ರ ಇವರ ಗ್ರಂಥಗಳಲ್ಲೂ ಮನುಸ್ಮøತಿಯಲ್ಲೂ ವ್ಯವಸಾಯ, ವಿಧಾನಗಳನ್ನು ವೈಜ್ಞಾನಿಕವಾಗಿ ನಿರೂಪಿಸಲಾಗಿದೆ; ವ್ಯವಸಾಯ ಒಂದು ಜೀವಪೋಷಕಕಲೆ ಎಂದೇ ಅಲ್ಲಿ ಅದಕ್ಕೆ ಮನ್ನಣೆ ನೀಡಲಾಗಿದೆ. ಮಳೆನೀರಿನ ನೆರವಿನಿಂದ ನಡೆಸುವ ವ್ಯವಸಾಯ; ನದಿ, ಕಾಲುವೆ, ಬಾವಿ, ಯಾಂತ್ರಿಕ ಸಾಧನೆ-ಇವುಗಳ ಉಪಯೋಗ; ಬೆಳೆ ಎತ್ತುವ ವಿಧಾನದಲ್ಲಿ ಅನುಸರಿಸಬೇಕಾದ ಆವರ್ತನೆ; ಮಣ್ಣಿನ ಮತ್ತು ಹವೆಯ ಗುಣವನ್ನು ತಿಳಿದುಕೊಂಡು ಬಿತ್ತಬೇಕಾದ ಬೀಜಗಳ ಆಯ್ಕೆ; ತೀವ್ರ ಹಾಗೂ ವಿಸ್ತಾರ ಕೃಷಿಯ ಸಾಪೇಕ್ಷ ಅನುಕೂಲತೆಗಳು; ಬೆಳೆಗಳಿಗೆ ಬೀಳುವ ಪಿಡುಗುಗಳ ನಿವಾರಣೆ; ಹಿಡುವಳಿಯ ಗಾತ್ರ; ಜಮೀನ್ದಾರ ಗೇಣಿದಾರ ಸಂಬಂಧ; ಸರ್ಕಾರಕ್ಕೆ ಸಲ್ಲಬೇಕಾದ ಕಂದಾಯ-ಇವೇ ಮುಂತಾದ ಕೃಷಿ ಹಾಗೂ ತತ್ಸಂಬಂಧ ಸಮಸ್ತ ಶಾಖೆಗಳನ್ನೂ ಕೂಲಂಕುಷವಾಗಿ ಯಾವ ಆಧುನಿಕ ಮಾನಕದಿಂದಲೂ ಅತ್ಯಾಧುನಿಕವಾಗಿ ಕಾಣುವಂತೆ ಈ ಗ್ರಂಥಗಳಲ್ಲಿ ನಿರೂಪಿಸಿರುವುದನ್ನು ನೋಡುವಾಗ ಪ್ರಾಚೀನ ಭಾರತದ ಕೃಷಿಪ್ರಗತಿಯ ಬಗ್ಗೆ ವಿಶೇಷಾಭಿಮಾನ ಮೂಡುವುದು ಸಹಜ. ಯುದ್ಧಕಾಲದಲ್ಲಿ ಸಹ ಕೃಷಿವ್ಯವಸ್ಥೆಗೆ ಯಾವ ಆತಂಕವೂ ಉಂಟಾಗದಂತೆ ಈ ಉದ್ಯಮ ಮುಂದುವರಿಯುತ್ತಿರಬೇಕೆಂಬುದು ಯುದ್ಧನಿರತ ರಾಷ್ಟ್ರಗಳೆಲ್ಲವೂ ಒಪ್ಪಿ ಪಾಲಿಸುತ್ತಿದ್ದ ಸತ್ಸಂಪ್ರದಾಯ. ನೆಲವೆಂದರೆ ಸಂಪತ್ತು, ನೆಲದ ಮೇಲೆ ವ್ಯವಸ್ಥಿತ ಕೃಷಿವಿಧಾನಗಳನ್ನು ಪ್ರಯೋಗಿಸುವುದರಿಂದ ಈ ಸಂಪತ್ತನ್ನು ಬಹುಪಾಲು ವೃದ್ಧಿಸಬಹುದು ಎಂದು ಅವರಿಗೆ ಚೆನ್ನಾಗಿ ಮನವರಿಕೆ ಆಗಿತ್ತು.

	ಸುವ್ಯವಸ್ಥಿತ ವ್ಯವಸಾಯದ ಪ್ರಥಮ ಹಂತವಾದ ಸಂಚಾರೀಭೂಸಾಗುವಳಿ ಹಾಗೂ ಸಾಕುಪ್ರಾಣಿಗಳ ಪಾಲನೆಯನ್ನು ಬೈಬಲಿನಲ್ಲಿ ಸುಸ್ಪಷ್ಟವಾಗಿ ವರ್ಣಿಸಿದೆ. ಹಳೇ ಬೈಬಲಿನ ಕಾಲದಲ್ಲಿ ವ್ಯವಸಾಯದ ವಿಧಾನ ಸಂಚಾರೀಸ್ವರೂಪದ್ದು. ಅದು ಕುರಿಪಾಲನೆಗೆ ಸಂಬಂಧಿಸಿತ್ತು. ಜನಸಂಖ್ಯೆ ವೃದ್ಧಿಹೊಂದಿದಂತೆ ಭೂಸಾಗುವಳಿ ಪುಷ್ಟಿಗೊಂಡಿತು. ಬರಬರುತ್ತ ಜನ ತಾವು ಸಾಗುವಳಿ ಮಾಡುತ್ತಿದ್ದ ಸ್ಥಳಗಳಲ್ಲಿಯೇ ಶಾಶ್ವತವಾಗಿ ನೆಲೆಸತೊಡಗಿದರು. ಸ್ವಾಭಾವಿಕವಾಗಿಯೇ ಫಲವತ್ಪ್ರದೇಶಗಳು, ಅನುಕೂಲ ಹವಾಪರಿಸ್ಥಿತಿ ಇದ್ದ ವಲಯಗಳು, ನದಿ ಸರೋವರ ಹಾಗೂ ಸಮುದ್ರ ತೀರದ ಭೂಮಿಗಳು ಈ ಜನರ ಆಯ್ಕೆಗಳಾದುವು. ಸಹಜವಾಗಿ ಕೃಷಿ ನಿವೇಶನಗಳು ಬೆಳೆದು ಕೃಷ್ಯಾಧಾರಿತ ಚಟುವಟಿಕೆಗಳಿಗೆ ಪ್ರಾಧಾನ್ಯ ಲಭಿಸಿತು. ಭಾರತ, ಮೆಸೊಪೊಟೇಮಿಯ, ಈಜಿಪ್ಟ್, ಚೀನ ಮುಂತಾದ ಪ್ರಾಚೀನ ನಾಗರಿಕತೆಗಳು ಕೃಷ್ಯಾಧಾರಿತವಾದವು. ಹೀಗೆ ಪ್ರಪಂಚ ಮೂಲತಃ ಕೃಷ್ಯಾಧಾರಿತವಾಗಿದ್ದರೂ ಯಂತ್ರೋದ್ಯಮಗಳು ರಂಗಪ್ರವೇಶಿಸಿದಂದಿನಿಂದ ಪರಿಸ್ಥಿತಿ ಸಂಕೀರ್ಣಗೊಳ್ಳಲಾರಂಭಿಸಿತು. ಬೆಳೆಯುತ್ತಿದ್ದ ಜನಸಂಖ್ಯೆ, ಕೈಗಾರಿಕಾ ಕ್ರಾಂತಿಯಿಂದ ಸಿದ್ಧಿಸಿದ ಹೊಸ ಆಯಾಮ, ಆಳರಸರ ಸಾಮ್ರಾಜ್ಯದಾಹ, ಸಾರಿಗೆ ಸಂಪರ್ಕಗಳ ವಿಕಾಸ ಮತ್ತು ಪ್ರಚಾರ ಇದೇ ಮುಂತಾದ ನೂತನಯುಗದ ಕೊಡುಗೆಗಳ ಫಲವಾಗಿ ಕೃಷಿಗೆ ಮೊದಲಿನ ಅವಧಾರಣೆ ತಪ್ಪಿ ಹೋಯಿತು. ಕೃಷಿಯನ್ನು ಸಹ ಒಂದು ಕೈಗಾರಿಕೆ ಎಂದು ಪರಿಗಣಿಸಿ ಅದನ್ನು ವೈಜ್ಞಾನಿಕವಾಗಿ ಅಭ್ಯಸಿಸಿ ವಿಜ್ಞಾನಲಭ್ಯ ಸಿದ್ಧಿಗಳನ್ನು ಅದಕ್ಕೆ ಅನ್ವಯಿಸಿ ಹೆಚ್ಚಿನ ಫಲಿತಾಂಶಗಳನ್ನು ಪಡೆಯುವ ಪ್ರವೃತ್ತಿ ತಲೆದೋರಿತು.

ಹೊಸ ಒಲವುಗಳು: ಪ್ರಪಂಚದ ಜನಸಂಖ್ಯೆ ವರ್ಷವೊಂದಕ್ಕೆ ಸುಮಾರು 2%ರಷ್ಟು ಹೆಚ್ಚುತ್ತಿದೆ. ಇದರಿಂದ ಆಹಾರದ ಬೇಡಿಕೆ ಒಂದು ಕಡೆ ಹೆಚ್ಚುತ್ತಿದ್ದರೆ ಆಹಾರ ಉತ್ಪಾದನೆಗೆ ಬೇಕಾದ ನೆಲ ಸಂಪತ್ತು ಇನ್ನೊಂದು ಕಡೆ ಕುಗ್ಗುತ್ತಿದೆ. ಈ ಉಭಯನಷ್ಟವನ್ನು ಸಮರ್ಥವಾಗಿ ಎದುರಿಸಲು ಹೊಸ ದಾರಿಗಳನ್ನು ಮಾನವ ಕಂಡುಕೊಂಡಿದ್ದಾನೆ-ವಿಸ್ತಾರಕೃಷಿ, ತೀವ್ರಕೃಷಿ, ಬೆಳೆಗಳ ಆವರ್ತನೆ, ಬಿತ್ತನೆಯ ಬೀಜಗಳ ತಳಿ ಅಭಿವೃದ್ಧಿ, ಸಂಕರ ಬೀಜಗಳ ಬಳಕೆ, ನೀರಿನ ನಿಯಂತ್ರಣ, ಮಣ್ಣಿನ ಪರೀಕ್ಷೆ ಮತ್ತು ಗುಣನಿರ್ಧಾರ, ಕೃತಕ ಗೊಬ್ಬರಗಳ ಸಾರ್ವತ್ರಿಕ ಉಪಯೋಗ, ಯಂತ್ರಗಳ ನೆರವು. ಕೀಟನಾಶಕಗಳ ಬಳಕೆ, ಹವೆಯ ನಿಯಂತ್ರಣ ಇವೇ ಮುಂತಾದವು ಕೃಷಿವಿಜ್ಞಾನದಲ್ಲಿ ಮಾನವ ತೋರಿಸುತ್ತಿರುವ ಈಚಿನ ಒಲವುಗಳು. ಈಗ ಕೃಷಿ ಎಂಬುದು ಒಂದು ಸುಸಂಘಟಿತ ಉದ್ಯಮ, ಯಾರೋ ಕೆಲವರು ವಿರಾಮವಾಗಿ ನಡೆಸುವ ಹವ್ಯಾಸವಲ್ಲ. ನಿಸರ್ಗ ತಾನೇ ತಾನಾಗಿ ಕೊಡುವ ಫಲಗಳು ಇಂದು ಸಾಲವು, ನಿಸರ್ಗ, ಮನುಷ್ಯಪ್ರಯತ್ನ, ವಿಜ್ಞಾನದ ನೆರವು ಹೀಗೆ ಮೂರು ಘಟಕಗಳ ಸಂಯುಕ್ತ ಫಲ ಇಂದಿನ ಕೃಷಿ. ಉದ್ದೇಶ ವೆಚ್ಚದಲ್ಲಿ ಮಿತವ್ಯಯ ಉತ್ಪಾದನೆಯಲ್ಲಿ ಗರಿಷ್ಠ ಸಿದ್ಧಿ.

	ಸಲಕರಣೆಗಳು: ಎಂದಿನಿಂದಲೂ ಪಳಗಿಸಿದ ಪ್ರಾಣಿಗಳಾದ ಹಸು, ಎತ್ತು, ಎಮ್ಮೆ, ಕೋಣ, ಕುದುರೆ ಮುಂತಾದುವು ಕೃಷಿಕನ ನಿಕಟ ಒಡನಾಡಿಗಳಾಗಿ ಬಂದಿವೆ. ಕೋಳಿ, ಹಂದಿ, ನಾಯಿ, ಆಡು, ಕುರಿ ಮುಂತಾದ ಇತರ ಸಾಕುಪ್ರಾಣಿಗಳು ಒಂದಲ್ಲ ಒಂದು ರೀತಿಯಲ್ಲಿ ಕೃಷಿಪ್ರಪಂಚದಲ್ಲಿ ದೃಢ ಅಸ್ತಿತ್ವ ಪಡೆದಿವೆ. ಇವೆಲ್ಲವೂ ಸೇರಿ ಕೃಷಿ ಅರ್ಥಶಾಸ್ತ್ರ ಒಂದು ಸಂಗತ ಚಿತ್ರವಾಗುತ್ತದೆ. ಈ ಪ್ರಾಣಿಗಳು ಕೃಷಿಕನ ಜೀವಂತ ಸಲಕರಣೆಗಳಾದರೆ ಬಡಿಗೆ, ಕೋಲಿನಿಂದ ತೊಡಗಿ ಕುಕ್ಕೆ, ನೇಗಿಲು, ತಟ್ಟೆ, ಏತ, ಚಕ್ರ, ಗಾಡಿಗಳ ಮೂಲಕ ಇಂದಿನ ಸ್ವಯಂಚಾಲಿತ ಯಂತ್ರಗಳವರೆಗಿನ ಸಮಸ್ತ ಸಲಕರಣೆಗಳೂ ಕೃಷಿಕನ ಅನಿವಾರ್ಯ ಒಡನಾಡಿಗಳು. ಏತ ಕಟ್ಟೆಗಳಿಂದ ಆರಂಭವಾದ ನೀರಾವರಿ ತಂತ್ರ ಇಂದಿನ ನೀರಾವರಿಯ ಬೃಹದ್ಯೋಜನೆಗಳಲ್ಲಿ ವಿಕಾಸಗೊಂಡಿದೆ.

	ಸಾಗುವಳಿ ಪದ್ಧತಿಗಳು : ಪ್ರಥಮ ವ್ಯವಸಾಯಗಾರರು ನೈಸರ್ಗಿಕ ಪದ್ಧತಿಯನ್ನು ಅನುಸರಿಸಿದರು; ಎಂದರೆ ಬಿತ್ತುವುದು ಮತ್ತು ಬೆಳೆ ಕೊಯ್ಯುವುದು ಬೆಳೆಯ ಇಳುವರಿ ಕಡಿಮೆ ಆದಾಗ ಹಳೆ ನೆಲವನ್ನು ಪಾಳುಬಿಟ್ಟು ಹೊಸ ಹಸುರುಗಳನ್ನು ಅರಸುತ್ತ ಹೋಗುವುದು. ಜಂಗಮ ಜನಸಂಖ್ಯೆಗೆ ಇದೇನೋ ಸರಿಹೊಂದಿತು. ಆದರೆ ಸ್ಥಾವರ ಜನಸಂಖ್ಯೆ ಹೀಗೆ ಮಾಡುವಂತಿರಲಿಲ್ಲ. ತಮ್ಮ ನೆಲೆಯ ವಲಯದಲ್ಲೇ ಒಂದಷ್ಟು ಭೂಮಿಯನ್ನು ಕ್ರಮಾನುಗತವಾಗಿ ಪಡ ಬೀಳಿಸಲು ಆರಂಭಿಸಿದರು. ಇಂಥ ಭೂಮಿ ಪುನರಪಿ ಕ್ರಮೇಣ ತನ್ನ ಫಲವಂತಿಕೆಯನ್ನು ಪಡೆಯುವವರೆಗೆ ಅದರ ಮೇಲೆ ಕೃಷಿ ಮಾಡುತ್ತಿರಲಿಲ್ಲ. ಪಡಬೀಳಿಸುವ ಪದ್ಧತಿ ಕ್ರಿ.ಪೂ.2,000 ವರ್ಷಗಳಷ್ಟು ಪ್ರಾಚೀನದಲ್ಲೇ ರೂಢಿಯಲ್ಲಿತ್ತು. ಇದೇ ವೇಳೆಗೆ ಬೂದಿ, ದನದಗೊಬ್ಬರ, ಸೊಪ್ಪು ಸೊದೆ ಮುಂತಾದವನ್ನು ಉಳುಮೆಯ ನೆಲಕ್ಕೆ ಯುಕ್ತ ಕಾಲಗಳಲ್ಲಿ ಯುಕ್ತ ಪ್ರಮಾಣಗಳಲ್ಲಿ ಸೇರಿಸಿ ಅದರ ಫಲವಂತಿಕೆಯನ್ನು ವರ್ಧಿಸುವ ಕ್ರಮವೂ ರೂಢಿಗೆ ಬಂದಿತ್ತು. ಮಧ್ಯಯುಗದ (ಸುಮಾರು 10ನೆಯ ಶತಮಾನ) ಇಂಗ್ಲೆಂಡಿನಲ್ಲಿ ಪ್ರಚಲಿತವಾಗಿದ್ದ ಎರಡು-ಮತ್ತು-ಮೂರು ಕ್ಷೇತ್ರ ಸಾಗುವಳಿಯನ್ನು ಇಲ್ಲಿ ಹೆಸರಿಸಬೇಕು. ಆ ಕಾಲದ ಇಂಗ್ಲೆಂಡಿನ ಜಹಗೀರುಗಳಲ್ಲಿಯ ಜಹಂಗೀರುದಾರರ ಮತ್ತು ಹಳ್ಳಿಗರ ಭೂಮಿಗಳನ್ನು ಒಟ್ಟಾಗಿ ಸೇರಿಸಿ ತೋಟ, ಸಾಗುವಳಿ ಪ್ರದೇಶ, ಹುಲ್ಲುಗಾವಲು, ಬಂಜರು ನೆಲ ಎಂಬುದಾಗಿ ವಿಂಗಡಿಸಿದ್ದರು. ಸಾಗುವಳಿ ಕ್ಷೇತ್ರವನ್ನು ಎರಡು ಅಥವಾ ಮೂರು ದೊಡ್ಡ ಹೊಲಗಳಾಗಿ ವಿಭಾಗಿಸಿ ಇಂಥ ಒಂದೊಂದು ಹೊಲವನ್ನು ಒಂದು ಎಕರೆ ಅಥವಾ ಕಡಿಮೆ ವಿಸ್ತೀರ್ಣದ ಪಟ್ಟಗಳಾಗಿ ವಿಭಾಗಿಸಿದ್ದರು. ಒಬ್ಬೊಬ್ಬ ರೈತ ಒಂದೊಂದು ಪಟ್ಟವನ್ನು ಸಾಗುವಳಿ ಮಾಡುತ್ತಿದ್ದ. ಮೂರು-ಕ್ಷೇತ್ರ ಸಾಗುವಳಿ ಪದ್ಧತಿಯಲ್ಲಿ ಒಂದು ಹೊಲವನ್ನು ಪಡಬಿಟ್ಟರೆ ಒಂದರಲ್ಲಿ ಗೋಧಿ ಅಥವಾ ರೈ ಧಾನ್ಯವನ್ನು ಬೆಳೆಸುತ್ತಿದ್ದರು. ಮತ್ತು ಇನ್ನೊಂದರಲ್ಲಿ ಬಾರ್ಲಿ ಓಟ್ ಧಾನ್ಯ ಬೆಳೆಗಳನ್ನು ಬೆಳೆಸುತ್ತಿದ್ದರು. ಎರಡು-ಕ್ಷೇತ್ರ ಸಾಗುವಳಿ ಪದ್ಧತಿಯಲ್ಲಿ ಅರ್ಧದಷ್ಟು ಭೂಮಿಯನ್ನು ಪಡಬಿಟ್ಟು ಉಳಿದ ಅರ್ಧದಲ್ಲಿ ಚಳಿಗಾಲದ ಮತ್ತು ವಸಂತ ಋತುವಿನ ಧಾನ್ಯಗಳನ್ನು ಬೆಳೆಸುತ್ತಿದ್ದರು. ಎರಡು-ಕ್ಷೇತ್ರದ ಪದ್ಧತಿಗಿಂತ 50% ಹೆಚ್ಚು ಇಳುವರಿ ಮೂರು-ಕ್ಷೇತ್ರದ ಸಾಗುವಳಿ ಪದ್ಧತಿಯಲ್ಲಿ ದೊರೆಯುತ್ತಿತ್ತು. ಪಡ ಬಿಡುವ ಪದ್ಧತಿ ಬೆಳೆಗಳ ಆವರ್ತನೆಗೆ ಅವಕಾಶ ಒದಗಿಸುತ್ತಿತ್ತು. ನೈಟ್ರೋಜನ್ನನ್ನು ನೆಲದಲ್ಲಿ ಸೆರೆ ಹಿಡಿದಿಡುವ ದ್ವಿದಳ ಧಾನ್ಯಗಳನ್ನು ಮೊದಲು ಬೆಳೆಸಿ ತರುವಾಯ ಅದೇ ಹೊಲದಲ್ಲಿ ತೃಣ ಧಾನ್ಯಗಳನ್ನು(ಮಿಲ್ಲೆಟ್ಸ್) ಬೆಳೆಸಿ ಹೆಚ್ಚು ಇಳುವರಿಯನ್ನು ಪಡೆಯುತ್ತಿದ್ದರು.

ಬೇಸಾಯದ ಸಮಸ್ಯೆಗಳು: ಭಾರತದಲ್ಲಿ ಶೇ.75ರಷ್ಟು ಮಂದಿ ಬೇಸಾಯವನ್ನು ಜೀವನ ವೃತ್ತಿಯಾಗಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿ ಹವಾಮಾನದ ಪ್ರಕಾರ 10 ವಲಯಗಳಿದ್ದು ಶೇ.65ರಷ್ಟು ಮಂದಿ ವ್ಯವಸಾಯವನ್ನೇ ನಂಬಿದ್ದಾರೆ. ಈ ಜನರಿಗೆ ತಮ್ಮ ನೆಲದ ಮೇಲಿರುವ ಪ್ರೇಮ ಮತ್ತು ಒಡನಾಟ ಮನುಷ್ಯಜನಾಂಗದಷ್ಟೇ ಪ್ರಾಚೀನವಾದದ್ದು. ಆದ್ದರಿಂದ ಬೇಸಾಯಕ್ಕೆ ಸಂಬಂಧಿಸಿದ ಯಾವ ಸುಧಾರಣೆಯೇ ಆಗಲಿ ಬೇಸಾಯವನ್ನೇ ಅವಲಂಬಿಸಿರುವ ಜನವರ್ಗದ ಹಿತವನ್ನು ಲಕ್ಷ್ಯದಲ್ಲಿ ಇಟ್ಟುಕೊಂಡು ಜಾರಿಗೆ ತರಬೇಕು. ಕೈಗಾರಿಕೆಗಳ ಕಾರ್ಮಿಕರು ಸುಸಂಘಟಿತರಾಗಿರುವುದರಿಂದ ಅವರ ಯೋಗಕ್ಷೇಮವನ್ನು ಆಡಳಿತೆಯಾಗಲೀ ಸರ್ಕಾರವಾಗಲೀ ಕಡೆಗಣಿಸಿ ಸುಧಾರಣೆಗಳನ್ನು ತರುವುದು ಸಾಧ್ಯವಾಗದು. ಬೇಸಾಯಗಾರರ ಪರಿಸ್ಥಿತಿ ಹೀಗಲ್ಲ. ದೇಶವಿಡೀ ಹರಡಿಹಂಚಿಹೋಗಿರುವ ಇವರ ಅಭಿವೃದ್ಧಿಯ ಕಡೆಗೆ ಸರ್ಕಾರ ಅಧಿಕ ಲಕ್ಷ್ಯಕೊಡಬೇಕು. ಇದು ಆಡಳಿತೆಯ ಸಮಸ್ಯೆಯಾದರೆ ಬೇಸಾಯದ ಇತರ ಸಮಸ್ಯೆಗಳು ನಿಸರ್ಗಜನ್ಯವಾದವು. ಅತಿವೃಷ್ಟಿ, ಅನಾವೃಷ್ಟಿ, ನೆರೆ ಹಾವಳಿ, ಕೀಟಗಳ ಪಿಡುಗು, ಸಸ್ಯವ್ಯಾಧಿಗಳು, ಬೆಂಕಿ, ಹವೆ, ಇತ್ಯಾದಿ. ವೈಜ್ಞಾನಿಕ ವಿಧಾನಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದರಿಂದ ನೈಸರ್ಗಿಕ ಸಮಸ್ಯೆಗಳಲ್ಲಿ ಹೆಚ್ಚಿನವನ್ನು ಪರಿಹರಿಸಬಹುದು ಮಾತ್ರವಲ್ಲ, ಅತಿವೃಷ್ಟಿ, ನೆರೆಹಾವಳಿ ಮೊದಲಾದವನ್ನು ಯುಕ್ತ ಪೂರ್ವಯೋಜನೆಗಳ ನೆರವಿನಿಂದ ಪ್ರಯೋಜನಕಾರಿಗಳಾಗಿ ಸಹ ಮಾಡಬಹುದು. ಇದು ಹೇಗೂ ಇರಲಿ, ಬೇಸಾಯದ ಪ್ರಧಾನ ಅವಳಿ ಸಮಸ್ಯೆಗಳೆಂದರೆ ಹವೆ ಮುನ್ಸೂಚಿಸಲಾಗದ ವರ್ತನೆ ಮತ್ತು ಬೇಸಾಯಗಾರರ ಕನಿಷ್ಠ ಜೀವನ ಮಟ್ಟ, ಇವನ್ನು ಪರಿಹರಿಸಲು ಪ್ರಪಂಚದ ವಿವಿಧ ರಾಷ್ಟ್ರಗಳಲ್ಲಿ ಬೇರೆ ಬೇರೆ ಯೋಜನೆಗಳಿವೆ. ಕೃಷಿಯ ಇನ್ನೊಂದು ಸಮಸ್ಯೆ ಭೂಸಂರಕ್ಷಣೆ. ಜಾನುವಾರುಗಳನ್ನು ಮಿತಿಮೀರಿ ಬೆಳೆಸಿಕೊಂಡು ಅವುಗಳ ಉಪಯೋಗಾರ್ಥ ಸಾಗುವಳಿ ಭೂಮಿಯ ಬಳಕೆ, ಅಶಾಸ್ತ್ರೀಯ ವಿಧಾನಗಳಿಂದ ಕೃಷಿ ಮಾಡಿ ನೆಲದ ಸಾರಗುಂದಿಸುವಿಕೆ, ಕಾಡುಗಳ ಅವ್ಯಾಹತ ಸೂರೆ, ಪಟ್ಟಣಗಳ ಅತಿವೃದ್ಧಿ, ನೀರಿನ ಪ್ರವಾಹದ ಮೇಲೆ ನಿಯಂತ್ರಣವಿಲ್ಲದೇ ಇಳಿಜಾರು ಪ್ರದೇಶಗಳಲ್ಲಿನ ಸವಕಳಿ ಇವೇ ಮುಂತಾದವು ಮಿತಿಯಲ್ಲಿರುವ ಕೃಷಿ ಭೂಮಿಯನ್ನು ಸಾರರಹಿತವನ್ನಾಗಿಸುತ್ತವೆ. ವ್ಯವಸಾಯ ಸುಧಾರಣೆಯ ಎಲ್ಲ ಯೋಜನಗೆಳೂ ಇವೆಲ್ಲ ಸಮಸ್ಯೆಗಳನ್ನೂ ಅವುಗಳ ತೀವ್ರ ಪರಿಣಾಮಗಳನ್ನೂ ಗಮನದಲ್ಲಿಟ್ಟುಕೊಳ್ಳಬೇಕು.						(ಪರಿಷ್ಕರಣೆ : ಜಿ.ಕೆ.ವಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ